ಕೆಲ್ಲಿ, ಹ್ಯೂ	

1939-1777 ಐರಿಷ್ ನಾಟಕಕಾರ ಮತ್ತು ಪತ್ರಿಕೋದ್ಯಮಿ. ಡಬ್ಲಿನ್ನಿನಲ್ಲಿ ಉಪಾಹಾರ ಗೃಹವಿಟ್ಟಿದ್ದ ಇವನ ತಂದೆ ಈತನನ್ನು ರವಿಕೆ ನಿಪುಣನಾಗಿದ್ದ ದರ್ಜಿಯೊಬ್ಬನ ಹತ್ತಿರ ಕೆಲಸ ಕಲಿಯಲು ಸೇರಿಸಿದ್ದ.

1760ರಲ್ಲಿ ಲಂಡನ್ನಿಗೆ ಬಂದ ಕೆಲ್ಲಿ, ರವಿಕೆ ಮಾಡಲು ಪ್ರಾರಂಭಿಸಿ ಅಮೇಲೆ ವಕೀಲನ ಗುಮಾಸ್ತೆಯಾಗಿ, ಕೊನೆಗೆ ಚಿಕ್ಕಪುಟ್ಟ ಸಾಹಿತ್ಯರಚನೆಯಲ್ಲಿ ತೊಡಗಿದ. ಅತ್ಯಂತ ಬಡತನವನ್ನು ಅನುಭವಿಸಿ ಥೆಸ್ಟಿಸ್ ಎಂಬ ಕುಚೋದ್ಯದ ನಾಟಕವನ್ನು ಪ್ರಕಟಿಸಿ (1760) ಅತ್ಯಂತ ಕ್ಷುದ್ರಮುನುಷ್ಯನೆಂದು ಕುಪ್ರಸಿದ್ಧನಾದ. ಈ ನಾಟಕ ಆ ಕಾಲದ ನಟನಟಿಯರ ಒಳಜೀವನವನ್ನು ಬಯಲು ಮಾಡಿತು; ಮ್ಯಾಗ್ಡಲೀನಳ ನೆನಪುಗಳು ಅಥವಾ ಲೂಯಿಸó ಮೈಲ್ಡ್‍ಮೆ ಚರಿತ್ರೆ ಎಂಬ ಕಾದಂಬರಿ 1767ರಲ್ಲಿ ಪ್ರಕಟವಾಯಿತು. ಅದು ಅಂಥ ಉತ್ತಮ ಕೃತಿಯೇನಲ್ಲ ಒಂದು ಕಾಲಕ್ಕೆ ಆಲಿವರ್ ಗೋಲ್ಡ್‍ಸ್ಮಿತ್ ಮತ್ತು ಕೆಲ್ಲಿ ಬಹಳ ಸ್ನೇಹಿತರಾಗಿದ್ದರು. ಸುಪ್ರಸಿದ್ಧ ನಟ ಡೇವಿಡ್ ಗ್ಯಾರಿಕ್‍ನನ್ನು ಗೋಲ್ಡ್‍ಸ್ಮಿತ್ ಬಹಳ ಹೊಗಳಿದ್ದರಿಂದಲೂ ಗೋಲ್ಡ್‍ಸ್ಮಿತ್ತನ ಗುಡ್ ನೇಚರ್ಡ್ ಮ್ಯಾನ್ ನಾಟಕದ ವಿರೋಧವಾಗಿ ಕೆಲ್ಲಿ ತನ್ನ ಫಾಲ್ಸ್ ಡೆಲಿಕಸಿ ಎಂಬ ನಾಟಕವನ್ನು ಆಡಿಸಿದ್ದರಿಂದಲೂ ಅವರಿಬ್ಬರ ನಡುವಣ ಸ್ನೇಹ ಕಲಕಿತು. ಕೆಲ್ಲಿಯದು ಭಾವಪ್ರಧಾನವಾದ ಸುಖಾಂತನಾಟಕ. ಯೋಗ್ಯತೆಯಿಲ್ಲದಿದ್ದರೂ ಆಗ್ಗೆ ಅದು ಬಹು ಯಶಸ್ಸು ಪಡೆಯಿತು. ಕೆಲ್ಲಿ ಸ್ವಲ್ಪಕಾಲ ಶ್ರೀಮಂತಿಕೆಯನ್ನು ಕಂಡ. ಆದರೆ ಲಾರ್ಡ್‍ನಾರ್ತ್‍ನ ಮಂತ್ರಿಮಂಡಲದ ಪರವಾಗಿ ಪತ್ರಿಕೆಗಳಲ್ಲಿ ಬರೆದದ್ದರಿಂದ ತನಗಿದ್ದ ಜನ ಪ್ರಿಯತೆಯನ್ನು ಕಳೆದುಕೊಂಡ. ಕೆಲ್ಲಿಯ ಮುಖ್ಯವಾದ ನಾಟಕ ದಿ ಸ್ಕೂಲ್ ಫಾರ್ ವೈವ್ಸ್. ಉಳಿದವು ಕ್ಲೆಮೆಂಟೀನ, ಎ ವರ್ಡ್ ಟು ದಿ ವೈಸ್, ದಿ ರೊಮಾನ್ಸ್ ವೈವ್ಸ್. ಆಫ್ ಎನ್ ಅವರ್, ದಿ ಮ್ಯಾನ್ ಆಫ್ ರೀಸನ್; ಈತನ ಫಾಲ್ಸ್ ಡೆಲಿಕಸಿ ನಾಟಕ ಫ್ರೆಂಚ್, ಇಟಾಲಿಯನ್, ಜರ್ಮನ್ ಮತ್ತು ಪೋರ್ಚುಗೀಸ್ ಭಾಷೆಗಳಿಗೆ ತರ್ಜುಮೆಯಾಗಿ ಪ್ಯಾರಿಸ್ ಮತ್ತು ಲಿಸ್ಟನ್ ನಗರಗಳಲ್ಲಿ ಅಭಿನಯಿಸಲ್ಪಟ್ಟಿತು. ಬಡತನದಲ್ಲಿ ಕ್ಷುದ್ರನಾಗಿದ್ದ ಕೆಲ್ಲಿ ಶ್ರೀಮಂತಿಕೆಯಲ್ಲಿ ದಯಾಳವೂ ಧಾರಾಳಿಯೂ ಆಗಿದ್ದ. ಅಲ್ಪ ವಿದ್ಯೆಯ ಕೆಲ್ಲಿಯನ್ನು ಡಾ.ಜಾನ್‍ಸನ್ `ಅವನು ಓದಿದ್ದಕ್ಕಿಂತ ಹೆಚ್ಚಾಗಿ ಬರೆದ ಎಂದು ಜರಿದ. ಗೋಲ್ಡ್‍ಸ್ಮಿತ್ ಸತ್ತಾಗ ಎಲ್ಲರ ಗಮನ ಸೆಳೆಯುವಂತೆ ಕೆಲ್ಲಿ ಅತಿಯಾಗಿ ದುಃಖ ಪ್ರದರ್ಶನ ಮಾಡಿದ. ಆದರೂ ಕೆಲ್ಲಿ ಗೋಲ್ಡ್‍ಸ್ಮಿತ್‍ನ ಅಯೋಗ್ಯ ವಿರೋಧಿ ಎಂದೇ ಜನತೆಯ ನೆನಪಿನಲ್ಲಿ ಉಳಿದಿದ್ದಾನೆ. ಕೆಲವು ಕಾಲ ವಕೀಲವೃತ್ತಿ ಮಾಡಿದ ಕೆಲ್ಲಿ ಬಡತನದ ಜೀವನ ನಡೆಸಿ, ಕುಡುಕನಾಗಿ ಚಿಕ್ಕ ವಯಸ್ಸಿನಲ್ಲಿ ಗತಿಸಿದ.				
	(ಎಂ.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ